ಬೆಂಗಳೂರು:ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, 2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರೋಮೋ ಬಿಡುಗಡೆಗೊಳಿಸಿದ್ದಾರೆ. ಸದಾಶಿವ ನಗರದ ತಮ್ಮ ನಿವಾಸದಲ್ಲಿಂದು 'ನಮ್ಮ ನಿಮ್ಮ ಕಾಂಗ್ರೆಸ್ ಪ್ರಣಾಳಿಕೆ' ಎಂಬ ಹೆಸರಿನ ಪ್ರೋಮೋ ರಿಲೀಸ್ ಮಾಡಿದರು.
ಬಳಿಕ ಮಾತನಾಡಿದ ಜಿ.ಪರಮೇಶ್ವರ್, ''ನಾಲ್ಕು ತಿಂಗಳ ಹಿಂದೆ ಜವಾಬ್ದಾರಿ ಕೊಟ್ಟಿದ್ರು. ಕಚೇರಿಯಲ್ಲಿ ಪ್ರಣಾಳಿಕೆ ತಯಾರಿಕೆ ಆಗಬಾರದು. ಜಲ್ವಂತ ಸಮಸ್ಯೆಗಳಿವೆ. ಇವುಗಳ ಬಗ್ಗೆ ಜನರ ಅಭಿಪ್ರಾಯ ಹಾಗೂ ಸಲಹೆ ಪಡೆದಿದ್ದೇವೆ. ನೌಕರರ ವರ್ಗದ ಜೊತೆ ಚರ್ಚಿಸಿದ್ದೇವೆ. ಎಫ್ಕೆಸಿಸಿ ಜೊತೆಗೂ ಸುದೀರ್ಘವಾಗಿ ಮಾತನಾಡಿದ್ದೇವೆ'' ಎಂದರು.
''ಜಿಲ್ಲಾವಾರು ಅಧಿಕಾರಿಗಳ ಕರೆದು ಚರ್ಚೆ ಮಾಡಿದ್ವಿ. ಜನರ ದೃಷ್ಟಿಯಿಂದ ಸಲಹೆ ಕೊಟ್ಟಿದ್ದಾರೆ. ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಕಾರ್ಮಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಒಳ್ಳೆಯ ಆಡಳಿತ ಬೇಕು ಎಂಬ ಚರ್ಚಿಸಿದ್ದೇವೆ. ಕರ್ನಾಟಕದಲ್ಲಿ ಯಾವ ರೀತಿ ಆಡಳಿತ ಇತ್ತು ಅಂತ ಗೊತ್ತಿದೆ. ಜನರಿಗೆ ಒಳ್ಳೆಯ ಆಡಳಿತ ಬೇಕು. ತಹಶೀಲ್ದಾರರ ಕಚೇರಿಯಲ್ಲಿ ಲಂಚ ಮುಕ್ತ ಕೆಲಸ ಆಗಬೇಕು. ಆದ್ರೆ ಬಿಜೆಪಿ ಸರ್ಕಾರದಲ್ಲಿ ಲಂಚ ಮುಕ್ತ ಆಗಲ್ಲ. ಇದನ್ನು ಜನರೇ ಹೇಳಿದ್ರು'' ಎಂದು ತಿಳಿಸಿದರು.
2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ:''ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ್ದೇವೆ. ರೈತನಿಗೆ ತಡೆರಹಿತ ವಿದ್ಯುತ್ ಪೂರೈಕೆ ಇದುವರೆಗೆ ಸಾಧ್ಯವಾಗಿಲ್ಲ. ಉಚಿತ ವಿದ್ಯುತ್ ಪೂರೈಕೆಗೆ ಬೇಕಾದ ಕೆಲಸಗಳನ್ನು ಮಾಡುತ್ತೇವೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ನಿರ್ದಿಷ್ಟ ಕಾರ್ಯಕ್ರಮ ನೀಡಬೇಕು. ಪ್ರವಾಸೋದ್ಯಮದಲ್ಲಿ ನಾವು ಬಹಳ ಹಿಂದುಳಿದಿದ್ದೇವೆ. ಪಕ್ಕದ ಕೇರಳದಲ್ಲಿ ಕೋಟ್ಯಂತರ ರೂ. ಪ್ರವಾಸೋದ್ಯಮದಿಂದಲೇ ಬರುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಕೂಡ ಗಣನೆಗೆ ತೆಗೆದುಕೊಂಡಿದ್ದೇವೆ. ಬಹಳಷ್ಟು ಯುವಕರು ಇವತ್ತು ಬೀದಿಯಲ್ಲಿದ್ದಾರೆ. 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಅದೆಲ್ಲವನ್ನೂ ಭರ್ತಿ ಮಾಡುವ ಅವಶ್ಯಕತೆ ಇದೆ. ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ. ಆದರೆ ದೇವಸ್ಥಾನ ನಿರ್ವಹಣೆ ಮಾಡುವುದಕ್ಕೆ ಯೋಜನೆಗಳ ಅವಶ್ಯಕತೆಯಿದೆ. ಧಾರ್ಮಿಕ ಸಾಮರಸ್ಯ ಇಡೀ ರಾಜ್ಯದಲ್ಲಿ ಅತ್ಯಗತ್ಯ'' ಎಂದು ಹೇಳಿದರು.