ಬೆಂಗಳೂರು:ನಿಷೇಧಿತ ಪಿಎಫ್‍ಐ ಮತ್ತು ಎಸ್‍ಡಿಪಿಐ ನಂತಹ ಶಕ್ತಿಗಳೊಂದಿಗೆ ತಾವು ಹೊಂದಿರುವ ಸಂಬಂಧವೇನು ಎಂಬುದನ್ನು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ದ್ವಿವೇದಿ ಆಗ್ರಹಿಸಿದರು.
ಬೆಂಗಳೂರಿನ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಹೇಳಿ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿನ 1,700 ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಇದು ಆ ಸಂಘಟನೆಗಳ ಮೇಲೆ ಕಾಂಗ್ರೆಸ್ಗೆ ಇರುವ ಪ್ರೀತಿ ಮತ್ತು ಸಂಬಂಧವನ್ನು ತೋರುತ್ತದೆ. ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಎಸ್‍ಡಿಪಿಐ ಅಧ್ಯಕ್ಷ ಹೇಳಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಸಂಬಂಧವಿತ್ತು ಎಂದು ಎಸ್‍ಡಿಪಿಐನ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಕಾಂಗ್ರೆಸ್, ಇಂತಹ ಶಕ್ತಿಗಳೊಂದಿಗೆ ಹೊಂದಿರುವ ಸಂಬಂಧ ರಾಷ್ಟ್ರೀಯವಾಗಿ ಅಂತಾರಾಷ್ಟ್ರೀಯವಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಹಂಪಿ ಉತ್ಸವದ ಬಗ್ಗೆ ನಿರ್ಲಕ್ಷ್ಯ:ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಂಪಿ ಉತ್ಸವ ನಿರ್ಲಕ್ಷಿಸಿ, ಟಿಪ್ಪು ಜಯಂತಿ ಆಚರಣೆಗೆ ಆಸಕ್ತಿ ತೋರಿತು. 2019ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಟಿಪ್ಪುಗೆ ಗೌರವ ನಮನ ಸಲ್ಲಿಸಿದ್ದರು. ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಕುಮ್ಮಕ್ಕು ನೀಡಿದ್ದವು. ಹಿಜಾಬ್ ವಿವಾದವನ್ನು ಸಹ ಇದೇ ಸಂಘಟನೆಗಳು ಹುಟ್ಟು ಹಾಕಿದ್ದವು ಎಂದು ಆರೋಪಿಸಿದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ಸ್ಫೋಟ ಪ್ರಕರಣವನ್ನು ಹೇಗೆ ಭಯೋತ್ಪಾದಕ ಕೃತ್ಯ ಎನ್ನಲಾಗುತ್ತದೆ. ಈ ಪ್ರಕರಣದ ಆರೋಪಿ ಅಮಾಯಕ ಎಂದು ಹೇಳಿದ್ದರು. ಇದು ಆ ಸಂಘಟನೆಯ ಮೇಲೆ ಡಿ.ಕೆ. ಶಿವಕಕುಮಾರ್ಗೆ ಇರುವ ಪ್ರೀತಿಯನ್ನು ತೋರುತ್ತದೆ. ಈ ಚುನಾವಣೆಯಲ್ಲಿ ರಾಷ್ಟ್ರ ವಿರೋಧಿಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪಕ್ಷಗಳಿಗೆ ಮತದಾರರು ತಕ್ಕ ಉತ್ತರವನ್ನು ನೀಡಲಿದ್ದು, ಶಾಂತಿ ಮತ್ತು ಪ್ರಗತಿಯೊಂದಿಗೆ ರಾಜ್ಯವನ್ನು ಕೊಂಡೊಯ್ಯುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.