ಬೆಂಗಳೂರು: ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಮುನ್ನಡೆಯ ಫಲಿತಾಂಶವನ್ನು ಆಧಾರಿಸಿ ಕಾಂಗ್ರೆಸ್ ಪಾಳೆಯದಲ್ಲಿ ಈಗ ಸಂಭ್ರಮ ಮನೆ ಮಾಡಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಚರ್ಚೆ ಗಂಭೀರವಾಗಿ ನಡೆಯುತ್ತಿದೆ. ಅತಂತ್ರ ಫಲಿತಾಂಶ ಬಂದರೆ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಗೊಂದಲದಲ್ಲಿದ್ದ ಕಾಂಗ್ರೆಸ್ ಹೈ ಕಮಾಂಡ್ ಮತ್ತು ಪಕ್ಷದ ಮುಖಂಡರಲ್ಲಿ ಇದೀಗ ಮುನ್ನಡೆಯ ಫಲಿತಾಂಶದ ಹಿನ್ನಲೆಯಲ್ಲಿ ಸ್ಪಷ್ಟತೆ ಸಿಗುತ್ತಿದೆ.
ಯಾರಾಗ್ತಾರೆ ಸಿಎಂ ಅಭ್ಯರ್ಥಿ: ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವರುಣಾ ಕ್ಷೇತ್ರದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಗೆದ್ದರೆ, ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಫರ್ಧಿಯಾಗಲಿದ್ದಾರೆ. ಅದರಂತೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಸಿದ್ದರಾಮಯ್ಯ ಬದಲಿಗೆ ತಮ್ಮನ್ನೆ ಮುಖ್ಯಮಂತ್ರಿ ಮಾಡುವಂತೆ ಪಕ್ಷದ ಹೈ ಕಮಾಂಡ್ ಮೇಲೆ ಒತ್ತಡವನ್ನು ಈಗಾಗಲೇ ಹಾಕಿದ್ದಾರೆ.
ವೋಟಿಂಗ್ ಮೇಲೆ ಆಯ್ಕೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಹಿರಿಯ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ಗೆ ಜಿಜ್ಞಾಸೆ ಮೂಡಿದೆ. ಚುನಾವಣೆ ಸಂಪೂರ್ಣ ಫಲಿತಾಂಶ ಪ್ರಕಟವಾದ ನಂತರ ಶಾಸಕಾಂಗ ಸಭೆಯಲ್ಲಿ ಶಾಸಕರ ವೋಟಿಂಗ್ ಆಧಾರದ ಮೇಲೆ ಮುಖ್ಯಮಂತ್ರಿ ಆಯ್ಕೆ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಪಕ್ಷದ ಹೈ ಕಮಾಂಡ್ ಬಂದಂತೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೆಚ್ಚಿನ ಶಾಸಕರ ಒಲವು ಯಾರಿಗೆ ಇರುತ್ತದೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಚುನಾಯಿಸುವಂತೆ ಸಿದ್ದರಾಮಯ್ಯ ಹೈ ಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಈಟಿವಿ ಭಾರತ್ ಕನ್ನಡಕ್ಕೆ ತಿಳಿಸಿದೆ.
ಶಾಸಕರ ಬೆಂಬಲಕ್ಕೆ ಕಸರತ್ತು: ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇರುವ, ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲವನ್ನು ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮದೇ, ನೆಟ್ವರ್ಕ್ಗಳ ಮೂಲಕ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡುವುದು ಅಂತಿಮವಾದರೆ, ಶಾಸಕರ ಪ್ರತಿ ವೋಟು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಅತ್ಯಗತ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲ ಪಡೆಯಲು ಸಿದ್ದರಾಮಯ್ಯನವರ ಗುಂಪು ಮತ್ತು ಡಿಕೆಶಿ ಅವರ ಗುಂಪು ಪ್ರಯತ್ನದಲ್ಲಿ ತೊಡಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯೂ ಸೇರಿದಂತೆ ಕಾಂಗ್ರೆಸ್ ಸರ್ಕಾರದ ರಚನೆ ಪ್ರಕ್ರಿಯೆ ಸುಗಮಗೊಳಿಸಲು ಹೈಕಮಾಂಡ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಪ್ರತಿನಿಧಿಯನ್ನಾಗಿ ಕಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದು, ಅವರು ಸಹ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ, ಸರ್ಕಾರ ರಚನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ರಾಜ್ಯ ವಿಧಾನಸಭೆಗೆ ಅತಿ ಹೆಚ್ಚು ಬಾರಿ ಆಯ್ಕೆಯಾದ ನಾಯಕರು: ಏನಾಗಲಿದೆ ಇವರ ಭವಿಷ್ಯ?