ಕರ್ನಾಟಕ

karnataka

ETV Bharat / assembly-elections

ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು; ಕೆ ಸುಧಾಕರ್​ ವಿರುದ್ಧ ಗೆದ್ದು ಬೀಗಿದ ಪ್ರದೀಶ್​ ಈಶ್ವರ್​​​ - ಡಾ ಕೆ ಸುಧಾಕರ್​ ವಿರುದ್ಧ ಭರ್ಜರಿ ಗೆಲುವು

ಆದಾಗಲೇ ತಮ್ಮ ಸ್ವಂತ ಕಾರ್ಯತಂತ್ರದಿಂದ ಪರಿಶ್ರಮ ಅಕಾಡೆಮಿ ಕಟ್ಟಿ ಬೆಳೆಸಿದ್ದ ಪ್ರದೀಪ್​​ ಈಶ್ವರ್​​ ಇದೀಗ, ಕ್ಷೇತ್ರದ ಘಟಾನುಘಟಿಯ ಸೋಲಿಗೆ ಕಾರಣರಾಗಿದ್ದಾರೆ.

Pradeep Eshwar
ಪ್ರದೀಶ್​ ಈಶ್ವರ್​​​

By

Published : May 13, 2023, 3:50 PM IST

ಬೆಂಗಳೂರು: ಕಾಂಗ್ರೆಸ್​ನಿಂದ ಮೊದಲ ಬಾರಿ ಟಿಕೆಟ್​ ಪಡೆದಿದ್ದ ಪ್ರದೀಪ್​ ಈಶ್ವರ್ ಐಯ್ಯರ್​​,​ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. 73165 ಮತಗಳನ್ನು ಗಳಿಸುವ ಮೂಲಕ ಮೊದಲ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ಮತ್ತೊಮ್ಮೆ ಕಾಂಗ್ರೆಸ್​ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ.

2018ರಲ್ಲಿ ಕಾಂಗ್ರೆಸ್​ ಮೂಲಕ ಭರ್ಜರಿ ಗೆಲುವು ಸಾಧಿಸಿದ ಡಾ ಕೆ ಸುಧಾಕರ್​ ವರ್ಷದೊಳಗೆ ಪಕ್ಷ ತೊರೆದು ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದರು. ಈ ಬಾರಿ ಚುನಾವಣೆಯಲ್ಲೂ ಭರ್ಜರಿ ಯಶಸ್ಸು ದಾಖಲಿಸುವ ಉಮೇದಿನಲ್ಲಿದ್ದ ಸುಧಾಕರ್​ ಅವರನ್ನು ಕಟ್ಟಿ ಹಾಕಿದ್ದು, ಪರಿಶ್ರಮ ಅಕಾಡೆಮಿಯ ಸ್ಥಾಪಕ, ಮಾತುಗಾರ ಪ್ರದೀಶ್​ ಈಶ್ವರ್​.

ಸ್ಟಾರ್​ ಪ್ರಚಾರಕ: ಆದಾಗಲೇ ನೀಟ್ ಪರಿಶ್ರಮ ಅಕಾಡೆಮಿಯ ಯಶಸ್ವಿ ಸೂತ್ರಧಾರನಾಗಿದ್ದ 38 ವರ್ಷದ ಪ್ರದೀಪ್​ ಈಶ್ವರ್​​ ಈ ಹಿಂದೆ ಅಂದರೆ 2018ರಲ್ಲಿ ಪಕ್ಷೇತರ ಅಭ್ಯರ್ಥಿ ನವೀನ್​ ಕಿರಣ್​ ಪರ ಪ್ರಚಾರ ನಡೆಸಿ, ಕಾಂಗ್ರೆಸ್​ ನಾಯಕರ ಗಮನ ಸೆಳೆದಿದ್ದರು. ಗಡಿ ಜಿಲ್ಲೆಯಲ್ಲಿನ ಹಣ, ಜಾತಿ, ಅಧಿಕಾರ ಭ್ರಷ್ಟಚಾರದ ಲೆಕ್ಕಾಚಾರ ನಡೆಸಿದ ಕಾಂಗ್ರೆಸ್​ ನಾಯಕರು 2018ರಲ್ಲಿ ಕ್ಷೇತ್ರದಲ್ಲಿ ಮಾತಿನ ಮೂಲಕವೇ ಮೋಡಿ ಮಾಡಿದ ಪ್ರದೀಪ್​ಗೆ ಟಿಕೆಟ್​ ನೀಡುವ ಚರ್ಚೆ ನಡೆಯಿತು. ಆದಾಗಲೇ ಸುಧಾಕರ್​ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್​ಗೆ ಟಿಕೆಟ್​ ನೀಡುವ ಸಂಬಂಧ ಕೂಡ ಪಕ್ಷ ಕ್ಷೇತ್ರ ಮುಖಂಡರ ಜೊತೆ ಚರ್ಚಿಸಿ, ಪಕ್ಷದ ಎರಡನೇ ಅಭ್ಯರ್ಥಿ ಪಟ್ಟಿಯಲ್ಲಿ ಟಿಕೆಟ್​ ನೀಡಿತು.

ಮಾತಿನ ಮೂಲಕವೇ ಮೋಡಿ: ಆದಾಗಲೇ ಬಿಜೆಪಿ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಹೆಸರು ಪಡೆದಿದ್ದ ಡಾ ಕೆ ಸುಧಾಕರ್​ ವಿರುದ್ಧ ಸ್ಪರ್ಧೆ ಪ್ರದೀಪ್​ಗೆ ಸುಲಭದ ಹಾದಿಯಾಗಿರಲಿಲ್ಲ. ನನ್ನ ಬಳಿ ಹಣ ಇಲ್ಲ, ಜನಬಲ ಇದೆ ಎಂದೇ ಪ್ರಚಾರ ಆರಂಭಿಸಿದ ಪ್ರದೀಪ್, ಬಡವರ ಮಕ್ಕಳು ಶಾಸಕರು ಆಗಬಾರದ ಎನ್ನುವ ಮೂಲಕ ಹಣ ಚೆಲ್ಲುವ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಭಾವನಾತ್ಮಕವಾಗಿ ಜನರಿಗೆ ಹತ್ತಿರವಾಗುತ್ತ​ ತಮ್ಮ ಮಾತಿನ ವರ್ಚಸ್ಸಿನ ಮೂಲಕವೇ ಕ್ಷೇತ್ರದ ಮತದಾರರ ಗಮನ ಸೆಳೆಯಲು ಮುಂದಾದರು.

ಅನಾಥ ಹುಡುಗನ ಎನ್ನುವ ಮೂಲಕ ಕ್ಷೇತ್ರದ ಮತದಾರರಿಗೆ ನಿಮ್ಮನೆ ಮಗ ನಾನು, ಈ ಕ್ಷೇತ್ರದ ಜನರಿಗೆ ಸಂಜೀವಿನಿಯಾಗುತ್ತೇನೆ ಎಂಬ ಭರವಸೆಯನ್ನು ನೀಡಿದರು. ಆರಂಭದಲ್ಲಿ ತಮ್ಮ ಮಾತಿನ ಮೂಲಕ ಜನರನ್ನು ಸೆಳೆದ ಪ್ರದೀಪ್​ ಕಡೆ ಕಡೆಯಲ್ಲಿ ಮಾತಿನ ಲಯ ತಪ್ಪಿದಂತೆ ಭಾಸವಾದರೂ ಜನರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾದರು.

ಜೀವಶಾಸ್ತ್ರ ಶಿಕ್ಷಕನಾಗಿರುವ ಪ್ರದೀಪ್​ ಈಶ್ವರ್​ ಐಯ್ಯರ್​ ಬಲಿಜ ಸಮುದಾಯದವರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಸಮುದಾಯ ಹೆಚ್ಚಿದ್ದು, ಇದು ಕೂಡ ಪ್ರದೀಪ್​ ಅವರ ಗೆಲುವಿನಲ್ಲಿ ಒಂದು ಅಂಶವಾಗಿದೆ. ಬಲಿಜ ಸೇರಿದಂತೆ ಜಿಲ್ಲೆಯ ಮತ್ತಷ್ಟು ಮತಗಳ ಧ್ರುವೀಕರಣ ಮಾಡುವಲ್ಲಿ ಅವರು ಸಫಲರಾದರು. ಬಿಜೆಪಿ ಅಭ್ಯರ್ಥಿ ಸುಧಾಕರ್​ ವಿರುದ್ಧ ಬಹಿರಂಗ ಟೀಕೆ, ತೀಕ್ಷ್ಣ ಭಾಷಣ, ಮನೆ ಮನೆ ಪ್ರಚಾರ ಕಾರ್ಯತಂತ್ರದ ಮೂಲಕ ಪ್ರದೀಪ್​ ಇದೀಗ ಗೆಲುವು ಕಂಡಿದ್ದಾರೆ. ಉದ್ಯಮದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿರುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ

ABOUT THE AUTHOR

...view details