ಬೆಂಗಳೂರು: ನಾವು ಈ ಬಾರಿ ಜನರ ಮುಂದೆ ನೆಗೆಟಿವ್ ಮ್ಯಾಂಡೇಟ್ ಕೇಳುತ್ತಿಲ್ಲ, ಪಾಸಿಟಿವ್ ಮ್ಯಾಂಡೇಟ್ ಕೇಳುತ್ತಿದ್ದೇವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎನ್ನುವುದು ಕೇವಲ ಊಹೆ ಮಾತ್ರ. ಸಮೀಕ್ಷೆ ನಡೆಸಿರುವ ಸಂಸ್ಥೆಗಳೂ ಇದೇ ಮನಸ್ಥಿತಿಯಲ್ಲಿವೆ. ಆದರೆ ವಾಸ್ತವವೇ ಬೇರೆಯೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರಂನಲ್ಲಿಂದು ಬಿಜೆಪಿಯ ರಾಜ್ಯ ಮಾಧ್ಯಮ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ, ಬಿಜೆಪಿ ಪ್ರಚಾರ ಗೀತೆ ಬಿಡುಗಡೆ ಮಾಡಿದರು. ನಂತರ ನೂತನ ಮಾಧ್ಯಮ ಕೇಂದ್ರದಲ್ಲಿ ಮೊದಲ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ಜನರ ಮುಂದೆ ಪ್ರತಿಪಕ್ಷಗಳ ವೈಫಲ್ಯದ ವಿಚಾರ ಇಟ್ಟು ಅದರ ಲಾಭ ಮಾಡಿಕೊಳ್ಳುವುದಿಲ್ಲ. ನಕಾರಾತ್ಮಕ ರಾಜಕಾರಣ ಮಾಡಲ್ಲ, ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ. ನಮ್ಮ ರಿಪೋರ್ಟ್ ಕಾರ್ಡ್ ಇಟ್ಟು ಚುನಾವಣೆ ಎದುರಿಸುತ್ತೇವೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಧರ್ಮ ವಿಭಜನೆ, ಕೋಮುಗಲಭೆ ಆಯಿತು, ಅದೆಲ್ಲಾ ನಮ್ಮ ಅವಧಿಯಲ್ಲಿ ಆಗಿಲ್ಲ, ಕಾಂಗ್ರೆಸ್ ಆಡಳಿತದ ವೇಳೆ ಕಾನೂನು ಸುವ್ಯವಸ್ಥಿತ ಸಂಪೂರ್ಣ ಹದಗೆಟ್ಟಿತ್ತು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಕೋವಿಡ್ ಇಲ್ಲದಾಗಲೂ ದಾಖಲೆ ಸಾಲ ಸಿದ್ದರಾಮಯ್ಯ ಮಾಡಿದ್ದರು, ಅದು ಕರಾಳ ದಿನ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಕಾಲದಲ್ಲಿ 50 ಕ್ಕೂ ಹೆಚ್ಚು ಹಗರಣವಾಯಿತು. ಎಸಿಬಿಯಲ್ಲಿ ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಲಾಯಿತು.
ಲೋಕಾಯುಕ್ತ ಅಧಿಕಾರ ಮೊಟಕು ಮಾಡಿ ಎಸಿಬಿ ರಚಿಸಿ ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಯಿತು. ಆದರೆ ನಾವು ಲೋಕಾಯುಕ್ತ ತಂದಿದ್ದೇವೆ, ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಇಲ್ಲ, ಕಾಂಗ್ರೆಸ್ ಅವಧಿಯಲ್ಲಿ ಲೋಕಾಯುಕ್ತ ಇದ್ದಿದ್ದರೆ ಇಂತಹ 50 ಕೇಸ್ ಆಗುತ್ತಿದ್ದವು ಎಂದು ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸದರು. ಹಾಗೆಯೇ ಸಮಾಜ ಸ್ವಚ್ಛ ಮಾಡುವ ಕೆಲಸ ಆಗಬೇಕು, ರಾಜಕೀಯ ಕಾರಣಕ್ಕೆ ಆರೋಪ ಮಾಡಬಾರದು, ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಸಿಎಂ ಟಾಂಗ್ ನೀಡಿದರು.
ನಾವು ಕ್ರಿಯಾಶೀಲ, ಬಡವರ, ದೀನದಲಿತ, ಹೆಣ್ಣುಮಕ್ಕಳು, ಯುವಕರು, ದುಡಿಯುವ ಸಮುದಾಯದ ಪರ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲ ವರ್ಗ ಬಿಜೆಪಿ ಕಡೆ ನೋಡುತ್ತಿದ್ದಾರೆ. ಮೋದಿ ಸರ್ಕಾರ, ನಮ್ಮ ಆಡಳಿತ ಮೆಚ್ಚಿ ನಮಗೆ ಅವಕಾಶ ನೀಡಿದಲ್ಲಿ ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣಕ್ಕೆ ಬದ್ದರಿದ್ದೇವೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಯೋಜನೆ ರೂಪಿಸಿದ್ದೇವೆ. ಇನ್ನಷ್ಟು ಶಕ್ತಿಶಾಲಿ ಕರ್ನಾಟಕ, ರೈತರಿಗೆ ಸದೃಢ ಸಮೃದ್ಧ ಕೊಡುವ ಕರ್ನಾಟಕ ನಿರ್ಮಾಣ ಮಾಡಲು ನಾವು ಬದ್ದರಿದ್ದೇವೆ ಎನ್ನುವ ಭರವಸೆ ನೀಡಿದರು.
ಮೀಸಲಾತಿ ಕುರಿತು ಮಾತನಾಡಿದ ಸಿಎಂ, ಬಂಜಾರ ಸಮುದಾಯದವರನ್ನು ಕರೆದು ಮಾತುಕತೆ ನಡೆಸಲಾಗುತ್ತದೆ. ಸದಾಶಿವ ಆಯೋಗದ ವರದಿ ಮೂಲಕ ನಮ್ಮನ್ನು ಎಸ್ಸಿ ಪಟ್ಟಿಯಿಂದ ಹೊರಗಿಡಲಾಗುತ್ತದೆ ಎನ್ನುವ ಆತಂಕ ಅವರದ್ದು, ಆದರೆ ಅವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಸದಾಶಿವ ಆಯೋಗದ ವರದಿ ಬಿಟ್ಟು ನಮ್ಮ ಸಚಿವ ಸಂಪುಟ ಉಪ ಸಮಿತಿ ರಚಿಸಿ ಅದರ ವರದಿಯಂತೆ ಎಸ್ಸಿಯಲ್ಲೇ ಮುಂದುವರೆಸಲಾಗಿದೆ. ತಪ್ಪು ತಿಳುವಳಿಕೆಯಿಂದ ಈ ರೀತಿ ಆಗಿದೆ. ಕಾಂಗ್ರೆಸ್ ನಾಯಕರು ಈ ರೀತಿ ಮಾಡುತ್ತಿದ್ದಾರೆ, ಅದನ್ನು ರಾಜಕೀಯವಾಗಿ ಎದುರಿಸಲಾಗುತ್ತದೆ ಎಂದರು.