ಜೈಪುರ (ರಾಜಸ್ಥಾನ) :ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಈ ಬಾರಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿಗೆ ಅಲ್ಪಸಂಖ್ಯಾತ ನಾಯಕರೊಬ್ಬರು ಶಾಕ್ ನೀಡಿದ್ದಾರೆ. ಪ್ರಮುಖ ಅಲ್ಪಸಂಖ್ಯಾತ ನಾಯಕ ಅಮೀನ್ ಪಠಾಣ್ ಅವರು ಬುಧವಾರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರೊಂದಿಗೆ ಹಲವು ಕೌನ್ಸಿಲರ್‌ಗಳು ಹಾಗೂ ಬಿಜೆಪಿ ಪದಾಧಿಕಾರಿಗಳು ಕೂಡ ಕಾಂಗ್ರೆಸ್ ಸದಸ್ಯತ್ವ ಪಡೆದರು.
ಅಮೀನ್ ಪಠಾಣ್ ಅವರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷರು ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಅಮೀನ್ ಪಠಾಣ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಸದಸ್ಯತ್ವ ಪಡೆದರು.
ಈ ವೇಳೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜಸ್ಥಾನದ ಜನರನ್ನು ಪ್ರಚೋದಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯದಲ್ಲಿ ಕೆಂಪು ಪುಸ್ತಕದ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದರು. ಅದರಲ್ಲಿ ನಮ್ಮ ಸಚಿವರ ಹೆಸರು ಇದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆಲ್ಲ ಪಕ್ಷ ಜಗ್ಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಮೀನ್ ಪಠಾಣ್ ಅವರು ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದ್ದಾರೆ. ಬಹುಕಾಲ ಬಿಜೆಪಿಯಲ್ಲೇ ಇರುವ ನಾಯಕರು ಅಲ್ಲಿಂದ ಹೊರಬರಲು ಸಿದ್ಧರಾಗಿದ್ದಾರೆ. ಅಲ್ಲಿ ಕೆಲಸ ಮಾಡುವ ವಾತಾವರಣ ಇಲ್ಲವಾಗಿದೆ. ಕಾಂಗ್ರೆಸ್ ದೇಶ ಒಗ್ಗೂಡಿಸಲು ತ್ಯಾಗ, ಬಲಿದಾನ ಮಾಡಿದ ಪಕ್ಷವಾಗಿದೆ. ಪಕ್ಷಕ್ಕೆ ಆಗಮಿಸಿರುವ ಅಮೀನ್ ಪಠಾಣ್ರಿಂದ ಕಾಂಗ್ರೆಸ್ ಬಲ ಹೆಚ್ಚಲಿದೆ ಎಂದರು.
ಪ್ರಧಾನಿ ಮೋದಿಗೆ 7 ಪ್ರಶ್ನೆ:ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ 7 ಪ್ರಶ್ನೆ ಕೇಳಿದ ಸಿಎಂ ಗೆಹ್ಲೋಟ್, ಪ್ರಧಾನಿ ಮೋದಿ ರಾಜಸ್ಥಾನಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ನಮ್ಮ ಸರ್ಕಾರ ನೀಡುವಂತೆ ಎಲ್ಲರಿಗೆ 25 ಲಕ್ಷ ರೂಪಾಯಿಗಳ ವಿಮೆಯನ್ನು ಯಾವಾಗ ನೀಡುತ್ತಾರೆ?. ದೇಶಾದ್ಯಂತ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ವ್ಯವಸ್ಥೆ(ಒಪಿಎಸ್) ಯಾವಾಗ ಜಾರಿಗೆ ಬರಲಿದೆ?, ದೇಶದ ಎಲ್ಲ ಜನರಿಗೆ 500 ರೂ.ಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಯಾವಾಗ ಸಿಗುತ್ತದೆ?, ನಗರ ಉದ್ಯೋಗ ಯೋಜನೆ ಯಾವಾಗ ಜಾರಿ?, ಇಆರ್ಸಿಪಿಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಯಾವಾಗ ಸಿಗಲಿದೆ?, ರಾಜಸ್ಥಾನದ ಪಾಲಿಗೆ ಸಿಗಬೇಕಾದ ಅನುದಾನ ಯಾವಾಗ ಬಿಡುಗಡೆಯಾಗುತ್ತದೆ?, ಅಗ್ನಿವೀರ್ ಬದಲಿಗೆ ನೀವು ಯಾವಾಗ ಸೈನ್ಯದಲ್ಲಿ ನಿಯಮಿತ ನೇಮಕಾತಿಯನ್ನು ಪ್ರಾರಂಭಿಸುತ್ತೀರಿ? ಎಂದು ಪ್ರಶ್ನೆ ಕೇಳಿದರು.
ಇದನ್ನೂ ಓದಿ:ಸ್ನೇಹಿತನನ್ನು ನಂಬಿ ಹೋದ ಅಸ್ಸೋಂ ಮಹಿಳಾ ಬಾಕ್ಸರ್ ವಿದೇಶದಲ್ಲಿ ಒತ್ತೆಯಾಳು: ಬಿಡಿಸಿಕೊಡಲು ಕುಟುಂಬದ ಮನವಿ