ಬೆಂಗಳೂರು:ಚಾಮರಾಜನಗರ ಮತ್ತು ವರುಣಾ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಲಿದ್ದಾರೆ. ಸಚಿವ ಆರ್.ಅಶೋಕ್ ಅವರಿಗೆ ಪದ್ಮನಾಭನಗರ ಮತ್ತು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಹಂಚಿಕೆ ಮಾಡಲಾಗಿದೆ.
ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಕೈ ಪಕ್ಷದ ಇಬ್ಬರು ಘಟಾನುಘಟಿ ನಾಯಕರನ್ನು ಅವರ ಕ್ಷೇತ್ರದಲ್ಲೇ ಮಣಿಸಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ. ಇನ್ನು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ಶಿವಮೊಗ್ಗ ನಗರ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
ಸೋಮಣ್ಣಗೆ ಡಬಲ್ ಹೊಣೆಗಾರಿಕೆ:ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಇಂದು ಬಿಡುಗಡೆಯಾಗಿದ್ದು, ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣ ತೊಟ್ಟಿರುವ ಕೇಸರಿಪಡೆಗೆ ವಿ.ಸೋಮಣ್ಣ ಸಾರಥಿಯಾಗಿದ್ದು ಎರಡು ಟಿಕೆಟ್ಗಳನ್ನು ಕೊಡುವ ಮೂಲಕ ವಸತಿ ಸಚಿವಗೆ ಸೋಮಣ್ಣಗೆ ಡಬಲ್ ಹೊಣೆವಹಿಸಿದೆ.