ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಮಾನಾಡಿದರು. ಬೆಂಗಳೂರು:ಶ್ರೀಧರ್ ರೆಡ್ಡಿ ಎಂಬ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗೆ ಬಿಟಿಎಂ ಲೇಔಟ್ನಿಂದ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಇಲ್ಲಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ರಿಮಿನಲ್ ಹಿನ್ನೆಲೆ ಹೊಂದಿರುವ, ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಟಿಕೆಟ್ ನೀಡುವಂತಿಲ್ಲ ಎಂಬ ನಿಮಯವಿದೆ. ಆದರೆ, ಅಪರಾಧ ಪ್ರಕರಣಗಳನ್ನು ಮರೆಮಾಚಿ ಚುನಾವಣಾ ಆಯೋಗಕ್ಕೆ ನಾಮಿನೇಷನ್ ಸಲ್ಲಿಸುವ ಹಾಗಿಲ್ಲ. ಕ್ರಿಮಿನಲ್ಗಳ ಕೇಸ್ಗಳನ್ನು ರದ್ದು ಮಾಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ ಎಂದು ಅವರು ಕಿಡಿಕಾರಿದರು.
ಶ್ರೀಧರ್ ರೆಡ್ಡಿ ತಾನೇ ಅಭ್ಯರ್ಥಿ ಅಂತಾ ಕ್ಷೇತ್ರದಲ್ಲಿ ಓಡಾಟ- ರಮೇಶಬಾಬು:ಕರ್ನಾಟಕದಲ್ಲಿ ಅಪರಾಧ ರಾಜಕಾರಣ ಮಾಡಲು ಹೊರಟಿದೆ ರಾಜ್ಯ ಬಿಜೆಪಿ. ಶ್ರೀಧರ್ ರೆಡ್ಡಿ ಎಂಬ ಬಿಜೆಪಿ ಮುಖಂಡನ ಮೇಲೆ 12 ಕ್ರಿಮಿನಲ್ ಮೊಕದ್ದಮೆಗಳು ಹೆಬ್ಬಗೋಡಿ ಠಾಣೆಯಲ್ಲಿ ದಾಖಲಾಗಿವೆ. ಈ ಶ್ರೀಧರ್ ರೆಡ್ಡಿಗೆ ಬಿಟಿಎಂ ಲೇಔಟ್ನಿಂದ ಬಿಜೆಪಿ ಟಿಕೆಟ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಶ್ರೀಧರ್ ರೆಡ್ಡಿ ನಾನೇ ಅಭ್ಯರ್ಥಿ ಅಂತ ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಟ ಮಾಡ್ತಾ ಇದ್ದಾರೆ ಎಂದು ರಮೇಶ ಬಾಬು ಹೇಳಿದರು.
9 ಎಕರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಅಕ್ರಮವಾಗಿ ಸೈಟ್ಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಜನರ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಶ್ರೀಧರ್ ರೆಡ್ಡಿ ಜೊತೆ ಇಲಿಯಾಜ್, ಬಾಬು ಸೇರಿಕೊಂಡಿದ್ದಾರೆ. ಶ್ರೀಧರ್ ರೆಡ್ಡಿ ನಾಮಿನೇಷನ್ ಮಾಡಬಾರದು. ಇವರ ಮೇಲಿರುವ ಪ್ರಕರಣಗಳ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಸೈಲೆಂಟ್ ಸುನೀಲ್, ಫೈಟರ್ ರವಿ, ಶ್ರೀಧರ್ ರೆಡ್ಡಿಯಂತವರನ್ನು ರಾಜಕೀಯಕ್ಕೆ ತರಲು ಬಿಜೆಪಿ ಹೊರಟಿದೆ ಎಂದು ದೂರಿದರು.
ಸುದೀಪ್ ಬಿಜೆಪಿಗೆ ನೀಡಿರುವ ಬೆಂಬಲ ವಿಚಾರವಾಗಿ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಬಿಜೆಪಿಯ ದಿವಾಳಿತನ ಸ್ಪಷ್ಟ- ಸುರ್ಜೇವಾಲಾ ಟ್ವೀಟ್:ನಟ ಸುದೀಪ್ರಿಂದ ಬಿಜೆಪಿಗೆ ಬೆಂಬಲ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ. ಟ್ವೀಟ್ನಲ್ಲಿ ಫಿಲ್ಮ್ ಸ್ಟಾರ್ ಯಾರನ್ನು ಬೆಂಬಲಿಸಬೇಕೆಂದು ಆಯ್ಕೆ ಮಾಡಿಕೊಳ್ಳುವಲ್ಲಿ ಸ್ವತಂತ್ರರು, ಕೆಲವೊಮ್ಮೆ ಐಟಿ-ಇಡಿ ಅಥವಾ ಬೇರೆ ರೀತಿಯಲ್ಲೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿಯ ದಿವಾಳಿತನ ಸ್ಪಷ್ಟವಾಗಿದೆ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಾತುಗಳನ್ನು ಕೇಳಲು ಯಾರೂ ಸುಳಿಯದ ಕಾರಣ, ಅವರು ಈಗ ಪ್ರೇಕ್ಷಕರನ್ನು ಸೆಳೆಯಲು ಚಲನಚಿತ್ರ ತಾರೆಯರನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಸಿನಿಮಾ ತಾರೆಯರಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ ಪ್ರಯೋಗ:ಕಾಂಗ್ರೆಸ್ ಪಕ್ಷ ಸಹ ಸುದೀಪ್ ಬೆಂಬಲ ವಿಚಾರವಾಗಿ ಟ್ವೀಟ್ ಮಾಡಿದ್ದು, ಸಿನೆಮಾ ನಟರನ್ನು ಓಲೈಸುವುದರಲ್ಲಿ ಮಗ್ನರಾಗಿರುವ ಬಸವರಾಜ ಬೊಮ್ಮಾಯಿ ಅವರೇ, ಮಹಾರಾಷ್ಟ್ರ ಕರ್ನಾಟಕದ ಗಡಿಯೊಳಗೆ ನುಗ್ಗಿ ಆರೋಗ್ಯ ಯೋಜನೆಯ ಜಾರಿಗೆ ಮುಂದಾಗಿದೆ ಎಂದು ಎಚ್ಚರಿಸಿದೆ. ಅಲ್ಲದೆ, ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲವೇ ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ:ಐಟಿ, ಇಡಿ, ಸಿಬಿಐ ಬಿಜೆಪಿಯ ಪ್ರೈವೇಟ್ ಡಿಪಾರ್ಟ್ಮೆಂಟ್ ಆಗಿವೆ: ದಿನೇಶ್ ಗುಂಡೂರಾವ್