ಹುಬ್ಬಳ್ಳಿ: ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಚುನಾವಣೆಗೂ ಮುನ್ನವೇ ನಮ್ಮಲ್ಲಿ ಟಿಕೆಟ್ ಘೋಷಣೆ ಮಾಡಲ್ಲ ಎಂದ ಅವರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇದೆ. ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಮಾತು ಯಾಕೆ ಕ್ರಿಯೇಟ್ ಆಗಿದೆ ಗೊತ್ತಿಲ್ಲ. ವಯಸ್ಸು, ಗೆಲ್ಲುವ ಮಾನದಂಡ ಇತ್ಯಾದಿ ಕಾರಣಗಳಿಂದಾಗಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಬಹುದು. ಕೆಲವರು ತಾವಾಗಿಯೇ ಹಿಂದೆ ಸರಿಯಬಹುದು ಎಂದರು.
ಒಳ ಮೀಸಲಾತಿ ವಿರೋಧಿಸಿ ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಈ ರೀತಿಯ ಕಲ್ಲುತೂರಾಟ ಪ್ರಕರಣ ನಡೆಯಬಾರದಿತ್ತು. ಒಳಮೀಸಲಾತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಪ್ರಕ್ರಿಯೆ ಮಾಡಲಾಗಿದೆ. ಒಳ ಮೀಸಲಾತಿ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಒಳ ಮೀಸಲಾತಿ ಕುರಿತ ಗೊಂದಲದಿಂದಾಗಿ ಈ ಘಟನೆ ಸಂಭವಿಸಿದೆ. ಆದರೆ ಕಾಂಗ್ರೆಸ್ ಇದರಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಉದ್ದೇಶಪೂರ್ವಕ ದಾಳಿ: ಸಚಿವ ಆರಗ ಜ್ಞಾನೇಂದ್ರ
ರಾಹುಲ್ ಗಾಂಧಿಯಿಂದ ಕಾಂಗ್ರೆಸ್ಗೆ ಡ್ಯಾಮೇಜ್-ಜಗದೀಶ್ ಶೆಟ್ಟರ್: ಮುಂದೆ, ರಾಹುಲ್ ಗಾಂಧಿ ಕೋಲಾರ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಬಂದಷ್ಟು ಕಾಂಗ್ರೆಸ್ ಅವಸಾನಕ್ಕೆ ಕಾರಣವಾಗುತ್ತೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಬಂದಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್ ಗೆ ಡ್ಯಾಮೇಜ್ ಆಗಿದೆ. ರಾಹುಲ್ ಗಾಂಧಿ ಬಂದು ಹೋಗುವುದರಿಂದ ಬಿಜೆಪಿಗೆ ಏನು ತೊಂದರೆ ಇಲ್ಲ ಎಂದರು.
ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ : ಬಿಜೆಪಿ ಪಕ್ಷವೇನೋ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚುನಾವಣೆ ಘೋಷಣೆ ನಂತರ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇದೇ ತಿಂಗಳ 25 ರಂದು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಈ ಪಟ್ಟಿಯನ್ನು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಪ್ರಕಟಗೊಳಿಸಿದ್ದರು. ತುಂಬಾ ಉಹಾಪೋಹವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣಾ ಕ್ಷೇತ್ರದ ಆಯ್ಕೆ ಕೊನೆಗೂ ವರುಣ ಕ್ಷೇತ್ರದ ಮೂಲಕ ಅಂತಿಮವಾಗಿದೆ. ಹಾಗೆ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಮತ್ತು ಡಾ ಜಿ ಪರಮೇಶ್ವರ್ ಕೊರಟಗೆರೆಯಿಂದ ಅಭ್ಯರ್ಥಿಯಾಗಿ ಕಣದಲ್ಲಿದ್ದು ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ;ಕರ್ನಾಟಕ ಚುನಾವಣೆ 2023: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯ ವರುಣ, ಡಿಕೆಶಿಗೆ ಕನಕಪುರ