ಕರ್ನಾಟಕ

karnataka

ETV Bharat / assembly-elections

ಬೈಲಹೊಂಗಲ ಮತಕ್ಷೇತ್ರದಲ್ಲಿ ಕೈ ಸ್ಥಿರ, ಕಮಲ ತಳಮಳ; ಅವಕಾಶಕ್ಕಾಗಿ ಜೆಡಿಎಸ್​ ಹೋರಾಟ

ಸಜ್ಜನಿಕೆಯ ಕ್ಷೇತ್ರ ಎಂದು ಕರೆಸಿಕೊಳ್ಳುವ ಬೈಲಹೊಂಗಲದಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾರ ಯಾರಿಗೆ ಆಶೀರ್ವಾದ ನೀಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ‌.

Bailhongal Assembly Constituency Profile
Bailhongal Assembly Constituency Profile

By

Published : Apr 10, 2023, 3:31 PM IST

ಬೆಳಗಾವಿ: ಬೈಲಹೊಂಗಲ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ವೀರರಾಣಿ ಬೆಳವಡಿ ಮಲ್ಲಮ್ಮ ಆಳಿದ, ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಇರುವ, ಸಂಗೊಳ್ಳಿ ರಾಯಣ್ಣ ಹುಟ್ಟಿದ ಐತಿಹಾಸಿಕ ಹಿನ್ನೆಲೆಯ ಮಹತ್ವ ಇದಕ್ಕಿದೆ. ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದರೆ, ಪಕ್ಷದ ಒಡಕಿನ ಲಾಭ ಪಡೆಯಲು ಕಾಂಗ್ರೆಸ್ ಹೊಂಚು ಹಾಕಿ ಕಾಯುತ್ತಿದೆ. ಈ ಮಧ್ಯೆ ನಮಗೂ ಒಂದು ಬಾರಿ ಆಶೀರ್ವಾದ ಮಾಡುವಂತೆ ಜೆಡಿಎಸ್ ನಾಯಕರು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲೀಗ ಕಾಂಗ್ರೆಸ್ಸಿಗ ಮಹಾಂತೇಶ ಕೌಜಲಗಿ ಶಾಸಕರು. ಇವರು ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮೊದಲ ಪಟ್ಟಿಯಲ್ಲಿ ಟಿಕೆಟ್​ ಕೂಡ ಪಡೆದಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ ಮತ್ತು ಜಗದೀಶ ಮೆಟಗುಡ್ಡ ಮಧ್ಯ ತೀವ್ರ ಪೈಪೋಟಿ ಇದೆ. ಜೆಡಿಎಸ್​​ನಿಂದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸ್ಪರ್ಧೆ ಖಚಿತ. ಆಮ್ ಆದ್ಮಿ ಪಕ್ಷದಿಂದ ಬಸನಗೌಡ ಚಿಕ್ಕನಗೌಡರ, ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪ್ರಶಾಂತ ಜಕ್ಕಪ್ಪನವರ ಸ್ಪರ್ಧಿಸಲಿದ್ದಾರೆ.

ಬೈಲಹೊಂಗಲ ಮತಕ್ಷೇತ್ರ

2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ ವಿರುದ್ಧ ಗೆದ್ದು ಮೊದಲ ಬಾರಿಗೆ ಬೈಲಹೊಂಗಲದಲ್ಲಿ ಬಿಜೆಪಿ ಖಾತೆ ತೆರೆಸುವಲ್ಲಿ ಜಗದೀಶ ಮೆಟಗುಡ್ಡ ಯಶ ಕಂಡಿದ್ದರು. 2008ರ ಚುನಾವಣೆಯಲ್ಲೂ ಮಹಾಂತೇಶ ವಿರುದ್ಧ ಜಗದೀಶ ಅವರೇ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಡಾ.ವಿಶ್ವನಾಥ ಪಾಟೀಲರು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಶಾಸಕರಾದರು. ನಂತರ ಕೆಜೆಪಿ ಕೂಡ ಬಿಜೆಪಿಯಲ್ಲೇ ವಿಲೀನವಾಯಿತು. 2018ರಲ್ಲಿ ನಡೆದ ಚುನಾವಣೆಯಲ್ಲಿ ಡಾ. ವಿಶ್ವನಾಥ ಪಾಟೀಲರಿಗೆ ಬಿಜೆಪಿ ಟಿಕೆಟ್‌ ನೀಡಿದ್ದರಿಂದ ಜಗದೀಶ ಮೆಟಗುಡ್ಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಇಬ್ಬರ ಜಗಳದ ಲಾಭ ಪಡೆದು ಮಹಾಂತೇಶ ಕೌಜಲಗಿ ಗೆಲುವು ಸಾಧಿಸಿದ್ದರು.

ವಿಶ್ವನಾಥ ಪಾಟೀಲ

ಈ ಬಾರಿಯೂ ಡಾ.ವಿಶ್ವನಾಥ ಪಾಟೀಲ ಮತ್ತು ಜಗದೀಶ ಮೆಟಗುಡ್ಡ ಟಿಕೆಟ್​ ಕೇಳಿದ್ದು, ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್​ ಸಿಕ್ಕರೂ ಮತ್ತೊಬ್ಬರು ಬಂಡಾಯದ ಬಾವುಟ ಹಾರಿಸುವುದು ನಿಶ್ಚಿತ. ಅಂತಿಮವಾಗಿ ಬೈಲಹೊಂಗಲ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಶಂಕರ ಮಾಡಲಗಿ

ಸರಳ ಸಜ್ಜನಿಕೆಯ ಕ್ಷೇತ್ರ ಎನ್ನುವುದೇಕೆ?:ರಾಜ್ಯದ 224 ಮತಕ್ಷೇತ್ರಗಳ ಪೈಕಿ ಅತ್ಯಂತ ಸರಳ ಸಜ್ಜನಿಕೆಯ ಶಾಸಕರನ್ನು ವಿಧಾನಸಭೆಗೆ ಕಳುಹಿಸಿ ಕೊಟ್ಟ ಕೀರ್ತಿ ಈ ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ. ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕಾರಣ ಮಾಡುವ ಇಲ್ಲಿನ ರಾಜಕಾರಣಿಗಳು ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ, ಟೀಕೆ ಟಿಪ್ಪಣಿ ಮಾಡಿದ ಉದಾಹರಣೆ ತೀರಾ ಅಪರೂಪ.

ಕ್ಷೇತ್ರಕ್ಕೆ ಒಂದೇ ಬಾರಿ‌ ಮಂತ್ರಿ ಸ್ಥಾನ: ಹೆಚ್​.ಡಿ.ದೇವೇಗೌಡರ ಸರ್ಕಾರದಲ್ಲಿ ಶಿವಾನಂದ ಕೌಜಲಗಿ ಅವರು, ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದು ಬಿಟ್ಟರೆ, ಈವರೆಗೂ ಬೈಲಹೊಂಗಲ ಕ್ಷೇತ್ರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಒಲಿದು ಬಂದಿಲ್ಲ.

ಜಗದೀಶ ಮೆಟಗುಡ್ಡ

ಕಿರಿಯ ವಯಸ್ಸಲ್ಲೇ ವಿಧಾನಸಭೆಗೆ ಆಯ್ಕೆ: ಕೇವಲ 25ನೇ ವಯಸ್ಸಿನಲ್ಲೆ ಮಹಾಂತೇಶ ಕೌಜಲಗಿ ಶಾಸಕರಾಗಿ ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದ್ದರು. 1996ರಲ್ಲಿ ಅವರ ತಂದೆ ಶಿವಾನಂದ ಕೌಜಲಗಿ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಮಹಾಂತೇಶ ಗೆದ್ದಿದ್ದರು.

ಲಿಂಗಾಯತ ಅಭ್ಯರ್ಥಿಗಳಿಗೆ ಗೆಲುವು: 1957ರಿಂದ ಈವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಲಿಂಗಾಯತರೇ ಗೆದ್ದಿದ್ದು ಕ್ಷೇತ್ರದ ವಿಶೇಷತೆ. ಅತಿ ಹೆಚ್ಚು ಲಿಂಗಾಯತ ಮತದಾರರನ್ನೇ ಹೊಂದಿರುವ ಈ ಕ್ಷೇತ್ರದಲ್ಲಿ ಬೇರೆ ಸಮುದಾಯದಿಂದ ಯಾರೂ ಶಾಸಕರಾಗಿಲ್ಲ. ಇನ್ನುಳಿದಂತೆ ಎಸ್ಸಿ, ಎಸ್ಟಿ, ಕುರುಬರು, ‌ಮುಸ್ಲಿಂರು‌ ಸೇರಿ ಇನ್ನಿತರ ಸಮುದಾಯದ ಮತದಾರರಿದ್ದಾರೆ.

ಬೈಲಹೊಂಗಲ ಮತಕ್ಷೇತ್ರದ ವಿವರ

ಮತದಾರರ ವಿವರ: ಬೈಲಹೊಂಗಲ ಕ್ಷೇತ್ರದಲ್ಲಿ ಒಟ್ಟು 1,93,870 ಮತದಾರರಿದ್ದು, ಇದರಲ್ಲಿ 97,180 ಪುರುಷರು, 96,688 ಮಹಿಳೆಯರು, ಇಬ್ಬರು ಇತರೆ ಮತದಾರರಿದ್ದಾರೆ. ಸಂಪಗಾಂವ–1 ಕ್ಷೇತ್ರ ಇದ್ದಾಗಿನಿಂದ ಈವರೆಗೆ ನಡೆದ 15 ಚುನಾವಣೆಗಳ ಪೈಕಿ 7 ಬಾರಿ ಕಾಂಗ್ರೆಸ್‌, ಜನತಾದಳ, ಬಿಜೆಪಿ, ಜೆಡಿಯು ತಲಾ ಎರಡು ಬಾರಿ ಗೆದ್ದಿದ್ದರೆ, ಒಂದು ಬಾರಿ ಜನತಾ ಪಕ್ಷ ಮತ್ತು ಕೆಜೆಪಿ ಗೆಲುವು ಸಾಧಿಸಿದೆ. ಒಂದು ಕಾಲಕ್ಕೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ, ಕೆಜೆಪಿ, ಜನತಾಪಕ್ಷ, ಜನತಾದಳ, ಜೆಡಿಯು ಗೆಲುವು ಕಂಡಿವೆ. ಮೂರು ದಶಕಗಳ ನಂತರ, ಕಾಂಗ್ರೆಸ್‌ ಮತ್ತೆ ತನ್ನ ಖಾತೆ ತೆರೆದಿದೆ.

ಕ್ಷೇತ್ರದಲ್ಲಾಗಬೇಕಿರುವ ಕೆಲಸಗಳೇನು?:ಮಲಪ್ರಭಾ ನದಿ ಸುತ್ತಲಿನ ರೈತರ ಭೂಮಿಗಳಿಗೆ ಮಾತ್ರ ನೀರಾವರಿ ವ್ಯವಸ್ಥೆ ಇದೆ. ಬಹುತೇಕ‌ ಕಡೆ ನೀರಾವರಿ ಇಲ್ಲದ್ದರಿಂದ ಒಣಬೇಸಾಯವನ್ನೇ ಇಲ್ಲಿನ ರೈತರು ನೆಚ್ಚಿಕೊಂಡಿದ್ದು, ಸಮಗ್ರ ನೀರಾವರಿ ಮಾಡಬೇಕಿದೆ. ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಿದ್ದು, ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ.

ಕ್ಷೇತ್ರದ ಶಾಸಕರ ವಿವರ:

1957 - ಹೆಚ್​.ವಿ. ಕೌಜಲಗಿ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1962 - ಚನ್ನಪ್ಪ ಶಂಕರೆಪ್ಪ ವಾಲಿ(ಕಲ್ಲೂರ) - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1967 - ಬಿ.ಎ.ಬೋಳಶೆಟ್ಟಿ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1972 - ಪಿ.ಬಿ.ಪಾಟೀಲ(ಅರವಳ್ಳಿ) - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1978 - ರಮೇಶ ಚನ್ನಬಸಪ್ಪ ಬಾಳೇಕುಂದ್ರಿ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1983 - ರಮೇಶ ಚನ್ನಬಸಪ್ಪ ಬಾಳೇಕುಂದ್ರಿ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1985 - ಶಿವಾನಂದ ಹೇಮಪ್ಪ ಕೌಜಲಗಿ - ಜನತಾ ಪಕ್ಷ
1989 - ಶಿವಾನಂದ ಹೇಮಪ್ಪ ಕೌಜಲಗಿ - ಜನತಾ ದಳ
1994 - ಶಿವಾನಂದ ಹೇಮಪ್ಪ ಕೌಜಲಗಿ - ಜನತಾ ದಳ
1996 - ಮಹಾಂತೇಶ ಶಿವಾನಂದ ಕೌಜಲಗಿ - ಜನತಾ ದಳ (ಉಪ ಚುನಾವಣೆ)
1999 - ಮಹಾಂತೇಶ ಶಿವಾನಂದ ಕೌಜಲಗಿ - ಜೆಡಿಯು
2004 - ಜಗದೀಶ ಚನ್ನಪ್ಪ ಮೆಟಗುಡ್ಡ - ಬಿಜೆಪಿ
2008 - ಜಗದೀಶ ಚನ್ನಪ್ಪ ಮೆಟಗುಡ್ಡ - ಬಿಜೆಪಿ
2013 - ಡಾ. ವಿಶ್ವನಾಥ ಪಾಟೀಲ - ಕೆಜೆಪಿ
2018 - ಮಹಾಂತೇಶ ಶಿವಾನಂದ ಕೌಜಲಗಿ - ಕಾಂಗ್ರೆಸ್

ಇದನ್ನೂ ಓದಿ:1985ರ ನಂತರ ಆಡಳಿತ ಪಕ್ಷಕ್ಕೆ ಸತತ ಎರಡನೇ ಬಾರಿ ದಕ್ಕದ ಕುರ್ಚಿ: ಹೊಸ ಇತಿಹಾಸ ಬರೆಯುತ್ತಾ ಬಿಜೆಪಿ ?

ABOUT THE AUTHOR

...view details