ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡ ಅಭ್ಯರ್ಥಿಗಳಿಗೆ ಬಿಜೆಪಿ ಬಿ ಫಾರಂ ವಿತರಿಸುತ್ತಿದೆ. ನಿನ್ನೆ 22 ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಲಾಗಿತ್ತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಮೊದಲ ದಿನವಾದ ಇಂದು ಕೂಡ ಟಿಕೆಟ್ ಪಡೆದ ಅಭ್ಯರ್ಥಿಗಳು ಪಕ್ಷದ ಕಚೇರಿಗೆ ಆಗಮಿಸಿ ಬಿ ಫಾರಂಗಳನ್ನು ಪಡೆದುಕೊಂಡರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಶಿರಾ ಶಾಸಕ ರಾಜೇಶ್ ಗೌಡ, ಅರಸೀಕೆರೆ ಅಭ್ಯರ್ಥಿ ಜಿ.ವಿ.ಬಸವರಾಜು, ಜಯನಗರ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ, ಬೆಂಗಳೂರು ದಕ್ಷಿಣ ಅಭ್ಯರ್ಥಿ ಎಂ.ಕೃಷ್ಣಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಬೈಂದೂರು ಅಭ್ಯರ್ಥಿ ಗುರುರಾಜ್ ಘಂಟಿಹೊಳಿ ಸೇರಿದಂತೆ ಹಲವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ಪಡೆದರು.
ನಾನು ಯಾವುದೇ ಒತ್ತಡ ಹಾಕಿರಲಿಲ್ಲ-ಜಿ.ತಿಪ್ಪಾರೆಡ್ಡಿ:ಬಿ ಫಾರಂ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಮುಖಂಡ, ಚಿತ್ರದುರ್ಗದ ಅಭ್ಯರ್ಥಿ ಜಿ.ತಿಪ್ಪಾರೆಡ್ಡಿ, ನನಗೆ 75 ವರ್ಷ ಮೀರಿದೆ. ಆದರೂ ಪಕ್ಷ ಟಿಕೆಟ್ ನೀಡಿದೆ. ನಾನು ಯಾವುದೇ ತರನಾದ ಒತ್ತಡ ಹಾಕಿರಲಿಲ್ಲ. ನನ್ನ ಸೇವೆ ಗುರುತಿಸಿ ಜಿಲ್ಲೆಯ ಆಗುಹೋಗುಗಳನ್ನು ನೋಡಿ ಟಿಕೆಟ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಆರೂ ಜನ ಅಭ್ಯರ್ಥಿಗಳು ಒಟ್ಟಿಗಿದ್ದೇವೆ. ಹಿಂದೆ ಐದು ಜನ ಗೆದ್ದಿದ್ದೆವು. ಈಗ ಆರೂ ಜನ ಗೆಲ್ಲುತ್ತೇವೆ. ಕನಿಷ್ಠ 130 ಸೀಟು ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮೋದಿಯವರ ಜೊತೆ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ ಎಂದರು.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಿರಿಯ ನಾಯಕ ಈಶ್ವರಪ್ಪ ತರ ನಿವೃತ್ತಿ ಪಡೆಯಬಹುದಿತ್ತು ಎನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ತಿಪ್ಪಾ ರೆಡ್ಡಿ, ಪಕ್ಷ ಕೇಳಿ ಈ ತೀರ್ಮಾನ ಮಾಡಬೇಕಿತ್ತು. ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷ ಟಿಕೆಟ್ ನೀಡಿದೆ ಹಾಗಾಗಿ ಇಂತಹ ತೀರ್ಮಾನ ಮಾಡಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ನಮ್ಮ ಕ್ಷೇತ್ರ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ತರ ಇಲ್ಲ. ಇದು ಬೇರೆಯ ರೀತಿಯ ರಾಜಕಾರಣ ಇರುವ ಕ್ಷೇತ್ರ ಹಾಗಾಗಿ ಪಕ್ಷ ನನಗೆ ಟಿಕೆಟ್ ನೀಡಿದ್ದು ಅದರಂತೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ನಾನು ನಮ್ಮ ಮಗನಿಗೆ ಟಿಕೆಟ್ ಕೇಳಿರಲಿಲ್ಲ. ಅದು ಮಾಧ್ಯಮದಲ್ಲಿ ಬಂದಿದ್ದಷ್ಟೆ. ವಯಸ್ಸಿನ ಆಧಾರದ ಮೇಲೆ ನನಗೆ ಟಿಕೆಟ್ ಕೊಡದಿದ್ದರೂ ನನಗೆ ಬೇಸರವಾಗುತ್ತಿರಲಿಲ್ಲ. ಸಂತೋಷವಾಗೇ ಇರುತ್ತಿತ್ತು. ಆದರೂ ಈಗ ಟಿಕೆಟ್ ಸಿಕ್ಕಿದೆ. ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿ ನಾವು 120 ಸೀಟುಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಳೆದ ಬಾರಿಯೇ ನನಗೆ ಸಚಿವ ಸ್ಥಾನ ಅವಕಾಶ ಸಿಕ್ಕಿತ್ತು. ಆದರೆ, ನಾನು ಒಪ್ಪಲಿಲ್ಲ. ಆರು ಬಾರಿ ಗೆದ್ದಿದ್ದೇನೆ. ಮಂತ್ರಿ ಆಗೋದಕ್ಕಿಂತ ಆರು ಬಾರಿ ಗೆಲ್ಲಿಸಿರೋದೆ ನನಗೆ ಖುಷಿ ಎಂದು ಹೇಳಿದರು.