ಗಂಗಾವತಿ:''ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿನ ಅಸಮಧಾನಿತರು ನನ್ನ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು ನಮ್ಮ ಪಕ್ಷಕ್ಕೆ ಬರುವುದಾದಲ್ಲಿ ಮುಕ್ತ ಸ್ವಾಗತ ನೀಡಲಾಗುವುದು'' ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಬಿಜೆಪಿ ಪಟ್ಟಿ ಬಿಡುಗಡೆಯಾದ ಬಳಿಕ ರಾಜ್ಯದಲ್ಲಿ ಭುಗಿಲೆದ್ದಿರುವ ಅಸಮಾಧಾನ ಲಾಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರೆಡ್ಡಿ, ಈ ಬಗ್ಗೆ ನಗರದಲ್ಲಿ ಕೈಗೊಂಡಿದ್ದ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ಯಾರೇ ಬಂದರೂ ಮುಕ್ತ ಸ್ವಾಗತ ನೀಡಲಾಗುವುದು. ಆಯಾ ಪಕ್ಷದ ಏಳ್ಗೆ, ಸಂಘಟನೆ ಮಾಡಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಕೆಲ ನಾಯಕರನ್ನು ರಾಷ್ಟ್ರೀಯ ಪಕ್ಷಗಳು ಹೇಗೆ ನಡೆಸಿಕೊಳ್ಳುತ್ತಿವೆ ಎಂಬುವುದರ ಬಗ್ಗೆ ಎರಡೂ ಪಕ್ಷಗಳು ಬಿಡುಗಡೆ ಮಾಡಿರುವ ಪಟ್ಟಿ ಗಮನಿಸಿದರೆ ಗೊತ್ತಾಗುತ್ತದೆ'' ಎಂದರು.
ಈಶ್ವರಪ್ಪ, ಶೆಟ್ಟರ್ ಬಗ್ಗೆ ನೋವಿದೆ:ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಿ ಅಧಿಕಾರಕ್ಕೆ ತರುವಲ್ಲಿ ತಮ್ಮ ಇಡೀ ಜೀವನ ಸವೆಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರಂತಹ ಬಹುದೊಡ್ಡ ನಾಯಕರನ್ನು ಪಕ್ಷ ಕಡೆಗಣಿಸುತ್ತಿರುವುದು ನೋವಿನ ಸಂಗತಿ. ವಯಸ್ಸಿನ ಕಾರಣ ಹೇಳುತ್ತಿರುವುದು ಸರಿಯಲ್ಲ. ಕೇವಲ ವಯಸ್ಸೇ ಮಾನದಂಡವಾಗಬಾರದು. ಆ ವ್ಯಕ್ತಿಯ ಹಿನ್ನೆಲೆ, ಆತ ಪಕ್ಷಕ್ಕೆ ಸಲ್ಲಿಸಿದ ಸೇವೆಯೂ ಗಮನಿಸಬೇಕು. ಪಕ್ಷದಲ್ಲಿ ಒಂದು ಐದಾರು ಜನ ನಾಯಕರಿದ್ದಾರೆ. ಈ ಹಿರಿಯರ ವಿಚಾರದಲ್ಲಿ ವಯಸ್ಸನ್ನು ಬದಿಗೊತ್ತಬಹುದಿತ್ತು. ಆದರೆ, ಬಿಜೆಪಿ ಆ ಕೆಲಸ ಮಾಡಿಲ್ಲ. ಇದು ಆ ಪಕ್ಷದ ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ. ಕೇವಲ ವಯಸ್ಸನ್ನು ಆಧಾರವಾಗಿ ಪರಿಗಣಿಸುವುದಾದರೆ 75 ವರ್ಷ ವಯಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಮಂತ್ರಿಯಾಗಿದ್ದರಲ್ಲವೇ ಎಂದು ರೆಡ್ಡಿ ಪ್ರಶ್ನಿಸಿದರು.
ಗೂಳಿಹಟ್ಟಿ ಸಂಪರ್ಕದಲ್ಲಿದ್ದಾರೆ:ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಗೂಳಿಹಟ್ಟಿ ಶೇಖರ್ ಅವರ ಪಾತ್ರ ದೊಡ್ಡದಿದೆ. ಪಕ್ಷಕ್ಕೆ ಬಹುಮತದ ಕೊರತೆ ಏರ್ಪಟ್ಟಾಗ ಯಾವುದೇ ಬೇಡಿಕೆ ಇಲ್ಲದೇ ನೇರವಾಗಿ ನನ್ನೊಂದಿಗೆ ಸ್ವಯಂ ಪ್ರೇರಣೆಯಿಂದ ಬಂದಿರುವ ವ್ಯಕ್ತಿ ಗೂಳಿಹಟ್ಟಿ ಶೇಖರ್.
ಅಂಥ ವ್ಯಕ್ತಿಗೆ ಟಿಕೆಟ್ ನಿರಾಕರಿಸಿರುವುದು ದುರಾದೃಷ್ಟಕರ. ಗೂಳಿಹಟ್ಟಿ ಶೇಖರ್ ಮತ್ತು ನಾನು ಇಬ್ಬರೂ ಉತ್ತಮ ಆತ್ಮೀಯ ಸ್ನೇಹಿತರಾಗಿದ್ದು, ಬಿಜೆಪಿಯ ಟಿಕೆಟ್ ಘೋಷಣೆ ಆಗುವ ಮುನ್ನವೇ ಶೇಖರ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದೆ. ಆದರೆ, ಇದೀಗ ಬಿಜೆಪಿಯ ಅಧಿಕೃತ ಟಿಕೆಟ್ ಘೋಷಣೆಯಾಗಿದೆ. ಗೂಳಿಹಟ್ಟಿಗೆ ಟಿಕೆಟ್ ಕೈ ತಪ್ಪಿದೆ. ಮುಂದೆ ಅವರ ನಡೆ ಏನಿರುತ್ತದೆ ಎಂಬುವುದು ಕಾಯ್ದು ನೋಡಬೇಕಿದೆ. ಈ ಬಗ್ಗೆ ಈಗಾಗಲೇ ಆಹ್ವಾನ ನೀಡಿದ್ದೇನೆ ಎಂದು ರೆಡ್ಡಿ ಹೇಳಿದರು.