ಕರ್ನಾಟಕ

karnataka

ETV Bharat / assembly-elections

ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳಿಂದ ಭಾರಿ ಕಸರತ್ತು.. ಜಿದ್ದಿಗೆ ಬಿದ್ದು ಆಶ್ವಾಸನೆಗಳ ಘೋಷಣೆ

ಮರಳಿ ಅಧಿಕಾರದ ಗದ್ದುಗೆ ಏರಬೇಕೆನ್ನುತ್ತಿರುವ ಬಿಜೆಪಿ, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇ ಬೇಕೆಂದು ತವಕಿಸುತ್ತಿರುವ ಕಾಂಗ್ರೆಸ್ ಪಕ್ಷ. ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ಪ್ರಾದೇಶಿಕ ಪಕ್ಷ ಜೆಡಿಎಸ್​ನ ಕನಸು. ಮತದಾರರ ಓಲೈಕೆಗೆ ಮೂರು ಪಕ್ಷಗಳು ನಾನಾ ಕಸರತ್ತು ಪ್ರಾರಂಭಿಸಿವೆ.

BJP JDS Congress
ಬಿಜೆಪಿ, ಜೆಡಿಎಸ್, ಕಾಂಗ್ರೆಸ್

By

Published : Apr 8, 2023, 6:47 PM IST

ಬೆಂಗಳೂರು:ಮರಳಿ ಅಧಿಕಾರಕ್ಕೆ ಬರಬೇಕು ಎನ್ನುತ್ತಿರುವ ಬಿಜೆಪಿ, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ತವಕಿಸುತ್ತಿರುವ ಕಾಂಗ್ರೆಸ್. ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ಪ್ರಾದೇಶಿಕ ಪಕ್ಷ ಜೆಡಿಎಸ್​ನ ಗುರಿಯಾಗಿದೆ. ಇದಕ್ಕಾಗಿ ರಾಜ್ಯದ ಮತದಾರರ ಓಲೈಕೆಗೆ ಮೂರು ಪಕ್ಷಗಳು ನಾನಾ ರೀತಿಯ ಕಸರತ್ತು ಆರಂಭಿಸಿವೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಭರ್ಜರಿ ಪೈಪೋಟಿ:ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅದಕ್ಕೂ ಮುನ್ನವೇ ಮೂರು ಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಮತದಾರರನ್ನು ಸೆಳೆಯಲು ಆಕರ್ಷಕ ಉಚಿತ ಕೊಡುಗೆಗಳ ಬಗ್ಗೆ ಆಶ್ವಾಸನೆಗಳನ್ನು ನೀಡುತ್ತಿವೆ. ಚುನಾವಣೆ ಬಂದಾಗ ಮತದಾರರನ್ನು ಸೆಳೆಯಲು ಉಚಿತ ಕೊಡುಗೆ ಆಶ್ವಾಸನೆ ನೀಡುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿ ಬಿಟ್ಟಿದೆ. ಆದರೆ, ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಬೇಕಾಗಿರುವ ಭರವಸೆಗಳನ್ನು ಈಗಾಗಲೇ ಸಮಾವೇಶ, ಚುನಾವಣಾ ಪ್ರಚಾರದ ರ‍್ಯಾಲಿಗಳಲ್ಲಿ ಪೈಪೋಟಿಗಿಳಿದವರಂತೆ ಮೂರು ಪಕ್ಷಗಳು ಪ್ರಕಟಿಸುತ್ತಿವೆ. ಉಚಿತ ಘೋಷಣೆಗಳಲ್ಲಿ ನಿರತರಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಯೋಜನೆಗಳನ್ನು ನೆನಪಿಸಲು ಮುಂದಾದ ಪಕ್ಷಗಳು:ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅತ್ಯಾಕರ್ಷಕ ಚುನಾವಣೆ ಭರವಸೆಯನ್ನು ಪ್ರಕಟಿಸಿದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತೊಂದು ಉಚಿತ ಕೊಡುಗೆ ಪ್ರಕಟಿಸಿ ಮತದಾರರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಾನೇನು ಕಡಿಮೆ ಇಲ್ಲವೆಂಬಂತೆ ಜೆಡಿಎಸ್ ವಿಭಿನ್ನವಾದ ಉಚಿತ ಕೊಡುಗೆ ಪ್ರಕಟಿಸುವ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರದ ನಾನಾ ಅಭಿವೃದ್ಧಿ ಯೋಜನೆಗಳು ಹಾಗೂ ಮೋದಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಒಳಗೊಂಡು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡುತ್ತಿದೆ. ಇನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಮ್ಮ ಅಧಿಕಾರಾವಧಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಮತದಾರರಿಗೆ ನೆನಪು ಮಾಡಿಕೊಡಲು ಪ್ರಯತ್ನಿಸುತ್ತಿವೆ.

ಚುನಾವಣಾ ಆಶ್ವಾಸನೆಗಳೇನು?:ಮತದಾರರ ಓಲೈಕೆಗೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಗಾಗಲೇ ಹಲವು ಆಶ್ವಾಸನೆ ನೀಡಿವೆ. ಕಾಂಗ್ರೆಸ್‌ ಭರವಸೆಗಳಿಗೆ ಬದ್ಧವಾಗುವುದಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಉದ್ಯೋಗ ನಷ್ಟ ಮತ್ತಿತರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುತ್ತಿವೆ. ಕಳೆದ ಕೆಲವು ಚುನಾವಣೆಗಳಲ್ಲಿ ಅತಂತ್ರ ಜನಾದೇಶದಿಂದ ಎದುರಾದ ಸಮಸ್ಯೆಗಳ ಬಗ್ಗೆ ಮೂರೂ ಪ್ರಮುಖ ಪಕ್ಷಗಳು ಪ್ರಸ್ತಾಪಿಸಿ, ಈ ಬಾರಿ ಸ್ಪಷ್ಟ ಬಹುಮತಕ್ಕಾಗಿ ಮನವಿ ಮಾಡುತ್ತಿವೆ. ಪ್ರಬಲ ಜಾತಿಗಳ ಒಲವು ಗಳಿಸುವ ಯತ್ನ ನಡೆದಿದ್ದು, ಮತಬ್ಯಾಂಕ್‌ ಗಟ್ಟಿಗೊಳಸುವ ಪ್ರಯತ್ನಕ್ಕೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಯತ್ನ ನಡೆಸಿವೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಬಲ ಸಂಪಾದಿಸಲು ಬಿಜೆಪಿ ಪ್ರಯತ್ನ ನಡೆಸಿದ್ದರೆ, ಲಿಂಗಾಯಿತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿವೆ.

ಯಾರ ಓಲೈಕೆ ಮಾಡ್ತಿವೆ ಈ ಮೂರು ಪಕ್ಷಗಳು?:ಹಿಜಾಬ್‌, ಹಲಾಲ್‌, ಟಿಪ್ಪು ಸುಲ್ತಾನ್‌ ಮತ್ತಿತರ ವಿವಾದಗಳನ್ನು ಸೃಷ್ಟಿಸಿ ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಮತ್ತೊಂದೆಡೆ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್‌ ತೊಡಗಿದೆ ಎಂದು ಬಿಜೆಪಿ ಆಪಾದಿಸುತ್ತಿದೆ. ಇದು ಪ್ರಚಾರದ ಅಖಾಡದಲ್ಲಿ ಇನ್ನಷ್ಟು ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ.

ರಣರಂಗದಲ್ಲಿ ಸದ್ದು ಮಾಡಲಿದೆ ಮೀಸಲಾತಿ:ಇನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಅದನ್ನು ಪಂಚಮಸಾಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ತಲಾ ಶೇ.2 ರಷ್ಟಂತೆ ಹಂಚಿಕೆ ಮಾಡಿದೆ. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾಕ್ಕೆ ವರ್ಗಾಯಿಸುವ ಮೂಲಕ ರಾಜಕೀಯ ಮೀಸಲಾತಿ ಕಸಿದುಕೊಳ್ಳಲಾಗಿದೆ. ಇದರ ಜೊತೆಗೆ ಪರಿಶಿಷ್ಟ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಿರುವ ವಿಚಾರವೂ ಚುನಾವಣೆಯಲ್ಲಿ ದೊಡ್ಡ ಸದ್ದು ಮಾಡಲಿದೆ.

ಪ್ರಣಾಳಿಕೆಗಳು ಬಿಡುಗಡೆ ಮಾಡುವ ಮುನ್ನವೇ ರಾಜ್ಯದ ಮತದಾರರಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಆಶ್ವಾಸನೆ ನೀಡುತ್ತಿವೆ. ಪ್ರಜಾಧ್ವನಿ ಬಸ್ ಯಾತ್ರೆ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಎಲ್ಲಾ ಮನೆಗಳಿಗೆ 200 ಯುನಿಟ್​ವರೆಗೆ ಉಚಿತ ವಿದ್ಯುತ್ ನೀಡಲಾಗುವುದೆಂದು ಘೋಷಣೆ ಮಾಡಿತು. ಕಾಂಗ್ರೆಸ್​ನ ಈ ಆಕರ್ಷಕ ಘೋಷಣೆಯನ್ನು ಬಿಜೆಪಿ ಕಟುವಾಗಿ ಟೀಕಿಸುವುದರ ಜೊತೆಗೆ ಇದೊಂದು ಬೋಗಸ್ ಭರವಸೆ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಪ್ರತಿಪಾದಿಸಿದೆ.

ಉಚಿತ ವಿದ್ಯುತ್ ಯೋಜನೆಗೆ ಆಡಳಿತ ಪಕ್ಷ ಬಿಜೆಪಿಯಿಂದ ತೀವ್ರವಾದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಮತ್ತೊಂದು ಆಕರ್ಷಕವಾದ ಮಹಿಳೆಯರನ್ನು ಸೆಳೆಯುವಂತಹ ಚುನಾವಣೆ ಆಶ್ವಾಸನೆ ಪ್ರಕಟಿಸಿದೆ. ಬೆಂಗಳೂರಿನಲ್ಲಿ ''ನಾ ನಾಯಕಿ'' ಎನ್ನುವ ಮಹಿಳಾ ಸಮಾವೇಶ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕುಟುಂಬ ನಿಭಾಯಿಸುವ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿತು. ಇದಲ್ಲದೇ ಇನ್ನೂ ಹಲವು ಜನಪರ ಯೋಜನೆಗಳಿಗೆ ಸಂಬಂಧಿಸಿದ ಚುನಾವಣಾ ಆಶ್ವಾಸನೆಗಳನ್ನು ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.

ಕಾಂಗ್ರೆಸ್ ಜೊತೆ ಪೈಪೋಟಿಗಿಳಿದಿರುವ ಬಿಜೆಪಿ, ಚುನಾವಣಾ ಆಶ್ವಾಸನೆಗಳಿಗೆ ಆಕರ್ಷಿತರಾಗಿ ಮತದಾರರು ಕಾಂಗ್ರೆಸ್ ಕಡೆ ವಾಲಬಾರದೆಂದು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಇನ್ನೊಂದೆಡೆ ಜೆಡಿಎಸ್ ಸಹ ತಾನೇನು ಕಡಿಮೆಯಿಲ್ಲ ಎಂಬಂತೆ ಅತ್ಯಾಕರ್ಷಕ ಚುನಾವಣಾ ಆಶ್ವಾಸನೆಗಳನ್ನು ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಪ್ರಕಟಿಸತೊಡಗಿದೆ. ಪೂರ್ಣ ಪ್ರಮಾಣದ ಜೆಡಿಎಸ್ ಸರ್ಕಾರ ಬಂದರೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣವನ್ನು ನೀಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಬಿಜೆಪಿ ಮತ್ತು ಕಾಂಗ್ರೆಸ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಎರಡು ಸಾವಿರ ರೂ. ಸಹಾಯಧನ ನೀಡುವ ಚುನಾವಣಾ ಆಶ್ವಾಸನೆ ಘೋಷಣೆ ಮಾಡಿದ್ದಕ್ಕೆ ಪ್ರತಿಯಾಗಿ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಜೆಡಿಎಸ್ ಸರ್ಕಾರ ಆಡಳಿತಕ್ಕೆ ಬಂದರೆ, ಮನ್ನಾ ಮಾಡಲಾಗುವುದೆಂದೂ ಸಹ ಪ್ರಕಟಿಸಿದೆ. ಯಶವಂತಪುರ ಕ್ಷೇತ್ರದ ಕೆಂಚೇನಹಳ್ಳಿಯಲ್ಲಿ ಇಂದು ಪಂಚರತ್ನ ರಥಯಾತ್ರೆ ನಡೆಸುತ್ತಿದ್ದ ಕುಮಾರಸ್ವಾಮಿ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ, ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರ ವಾಹನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಮತದಾರರನ್ನು ಆಕರ್ಷಿಸಲು ಕೊಡುಗೆಗಳ ಮಹಾಪೂರ: ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾರರನ್ನು ಆಕರ್ಷಿಸಲು ಉಚಿತ ಕೊಡುಗೆಗಳ ಮಹಾಪೂರವನ್ನೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಘೋಷಣೆ ಮಾಡಲು ಆರಂಭಿಸಿವೆ. ಮೂರು ಪಕ್ಷಗಳು ಪ್ರಕಟಿಸುವ ಚುನಾವಣಾ ಆಶ್ವಾಸನೆಗಳು ಕಾರ್ಯಗತವಾಗುತ್ತವೆಯೇ ಅಥವಾ ಗೊಂದಲವಾಗಿ ಉಳಿಯುತ್ತವೆಯೇ? ಎಂಬ ಸಂದೇಹ ಮತದಾರರಲ್ಲಿ ಮೂಡಿವೆ. ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷ ಘೋಷಣೆ ಮಾಡಿರುವ ಉಚಿತ ಕೊಡುಗೆಗಳು ಕಾರ್ಯಗತ ಮಾಡುತ್ತದೆಯೇ ? ಅಥವಾ ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬಿಜೆಪಿಯವರದ್ದು 60-65 ಸೀಟ್ ಅಷ್ಟೇ, ಸೋಲನ್ನು ಒಪ್ಪಿಕೊಳ್ತಿದ್ದಾರೆ: ಡಿ ಕೆ ಶಿವಕುಮಾರ್

ABOUT THE AUTHOR

...view details